ನಾರಾಯಣ ಗುರುಗಳ ಆದರ್ಶದಲ್ಲೇ 25 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ: ಬಿ.ಕೆ. ಹರಿಪ್ರಸಾದ್

ನಾರಾಯಣ ಗುರುಗಳ ಆದರ್ಶದಲ್ಲೇ 25 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ: ಬಿ.ಕೆ. ಹರಿಪ್ರಸಾದ್

ಮಂಗಳೂರು: “ನಾನು ಕಳೆದ 25 ವರ್ಷಗಳ ರಾಜಕೀಯ ಜೀವನವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸುತ್ತಾ ನಡೆಸಿಕೊಂಡು ಬಂದಿದ್ದೇನೆ. ಜಾತಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಯನ್ನು ಬಂಡವಾಳವನ್ನಾಗಿಸಿಕೊಂಡು ರಾಜಕಾರಣ ಮಾಡಿದವನಲ್ಲ. ಗುರುಗಳ ಚಿಂತನೆ, ಆದರ್ಶ ಮತ್ತು ಮಾರ್ಗದರ್ಶನದೊಂದಿಗೆ ಸಾರ್ವಜನಿಕ ಜೀವನದಲ್ಲಿ ಬದುಕಲು ನಾವೆಲ್ಲರೂ ಪ್ರಯತ್ನಿಸಬೇಕು” ಎಂದು ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಹೇಳಿದರು.

ಮಂಗಳೂರಿನ ಪುರಭವನದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರು ಹಿಂದೂ ಧರ್ಮದ ವಿರುದ್ಧ ಬಂಡಾಯವೆದ್ದು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಗೌತಮ ಬುದ್ಧರು ಹಿಂದೂ ಧರ್ಮದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶದಿಂದ ಬೌದ್ಧ ಧರ್ಮವನ್ನು ಸ್ಥಾಪಿಸಿದರು. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೆ ಮಾಡಲಿಲ್ಲ. ಹಿಂದೂ ಧರ್ಮದಲ್ಲಿಯೇ ಉಳಿದುಕೊಂಡು ಅದರೊಳಗಿನ ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳ ವಿರುದ್ಧ ಸುಧಾರಣೆಯ ಹಾದಿಯನ್ನು ತೋರಿಸಿದರು ಎಂದು ಅವರು ಹೇಳಿದರು.

ಶತಮಾನಗಳ ಕಾಲ ಶೂದ್ರರಿಗೆ ದೇವಸ್ಥಾನ ಪ್ರವೇಶ ಮಾತ್ರವಲ್ಲದೆ, ದೇವಸ್ಥಾನದ ಸುತ್ತಮುತ್ತಲೂ ಸಂಚರಿಸುವ ಅವಕಾಶವೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಾರಾಯಣ ಗುರುಗಳು ಶೂದ್ರ ಶಿವನ ದೇವಸ್ಥಾನವನ್ನು ಸ್ಥಾಪಿಸುವ ಮೂಲಕ ಸಮಾನತೆಯ ಸಂದೇಶವನ್ನು ಸಾರಿದರು ಎಂದು ಬಿ.ಕೆ. ಹರಿಪ್ರಸಾದ್ ವಿವರಿಸಿದರು.

“ಹಿಂದೆ ನಮಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದವರನ್ನೇ ರಕ್ಷಿಸಲು ಇಂದು ನಮ್ಮ ಶೂದ್ರರೇ ಮುಂದೆ ಹೋಗುತ್ತಿರುವುದು ವಿಪರ್ಯಾಸ. ಅದಕ್ಕಿಂತಲೂ ವಿಷಾದಕರವೆಂದರೆ, ಧರ್ಮದ್ವೇಷ ಹಾಗೂ ಕೋಮುವಾದದ ಬಲೆಗೆ ಹೆಚ್ಚು ಸಿಲುಕುತ್ತಿರುವವರಲ್ಲಿ ನಾರಾಯಣ ಗುರುಗಳ ಅನುಯಾಯಿಗಳೂ ಕಾಣಿಸಿಕೊಳ್ಳುತ್ತಿರುವುದು” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಅವರು, “ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಆರೋಪಿ ನಮ್ಮ ಬಿಲ್ಲವ ಸಮಾಜಕ್ಕೆ ಸೇರಿದವನು ಎಂಬುದು ಅತ್ಯಂತ ನೋವಿನ ಸಂಗತಿ. ನಮಗೆ ಆ ಹೆಣ್ಣುಮಗಳನ್ನೇ ಕೊಲೆ ಮಾಡುವ ಅಗತ್ಯವೇನಿತ್ತು? ಹಿಂದುಳಿದ ವರ್ಗಗಳ ಮಕ್ಕಳು ಧರ್ಮದ ವಿಷವರ್ತುಲಕ್ಕೆ ಸಿಲುಕಿ, ಕೋಮುವಾದದ ಅಮಲಿನಲ್ಲಿ ಕೊಲೆ ಪ್ರಕರಣಗಳಲ್ಲಿ ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಬಾರದು. ನಮ್ಮ ಮಕ್ಕಳನ್ನು ಅಂತಹ ದಾರಿಯಿಂದ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.

ಮುಂದಿನ ಪೀಳಿಗೆಗೆ ನಾರಾಯಣ ಗುರುಗಳ ಬದುಕು, ಚಿಂತನೆ ಮತ್ತು ಆದರ್ಶಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ ಅವರು, ಸಮಾಜದ ಮಕ್ಕಳು ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸ್ವಾವಲಂಬಿಗಳಾಗುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಮ್ಮನ್ನು ಅತ್ಯಂತ ಪ್ರೀತಿಯಿಂದ ಸನ್ಮಾನಿಸಿದ ಆಯೋಜಕರು ಹಾಗೂ ಸಾರ್ವಜನಿಕರಿಗೆ ವಿಶೇಷ ಕೃತಜ್ಞತೆಗಳನ್ನು ಬಿ.ಕೆ. ಹರಿಪ್ರಸಾದ್ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು, ಸಮುದಾಯದ ಮುಖಂಡರಾದ ನವೀನ್ ಚಂದ್ರ ಸುವರ್ಣ, ಶಾಸಕರಾದ ಸುನೀಲ್ ಕುಮಾರ್ ಸೇರಿದಂತೆ ಆಯೋಜಕರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಗುರುಗಳ ಆದರ್ಶ — ಸಮಾನತೆಯ ದಾರಿ

ಶಿಕ್ಷಣ • ಸ್ವಾವಲಂಬನೆ • ಸಮಾನತೆ • ಸಾಮರಸ್ಯ

BYV NEWS | ಸತ್ಯದ ಹುಡುಕಾಟದಲ್ಲಿ ನಿರಂತರ…

#BKNarayanaguru #BKHariprasad #NarayanaGuru #NarayanaGuruJayanthi #172ndNarayanaGuruJayanthi #Billava #BillavaSamaja #Mangalore #Kudroli #Samarsya #Equality #Education #SocialReform #BYVNEWS

Leave a Reply

Your email address will not be published. Required fields are marked *