ದೇವಸ್ಥಾನಗಳು ಕೇವಲ ಭಕ್ತಿಯ ಕೇಂದ್ರಗಳಾಗದೆ ಪರಿವರ್ತನೆಯ ಕೇಂದ್ರಗಳಾಗಬೇಕು: ಡಾ. ಸದಾನಂದ ಪೂಜಾರಿ

ಬಜಪೆ–ಕರಂಬಾರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ 172ನೇ ನಾರಾಯಣ ಗುರು ಜಯಂತಿ ಆಚರಣೆ

ಬಜಪೆ, ಆ.28: ದೇವಸ್ಥಾನಗಳು ಕೇವಲ ಭಕ್ತಿಯ ಕೇಂದ್ರಗಳಾಗದೆ, ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಪರಿವರಾವಣೆಗೆ ದಾರಿತೋರುವ ಪರಿವರ್ತನೆಯ ಕೇಂದ್ರಗಳಾಗಬೇಕು ಎಂದು ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.), ಬಜಪೆ–ಕರಂಬಾರು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯ ಪ್ರಯುಕ್ತ ಆ.28ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂಬ ಆಶಯದೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ದೇವಸ್ಥಾನಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಡಾ. ಸದಾನಂದ ಪೂಜಾರಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಮ ಪೂಜಾರಿ ವಹಿಸಿದ್ದರು.

ಪ್ರತಿಭೆ ಹಾಗೂ ಸಮಾಜ ಸೇವೆಗೆ ಗೌರವ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಗುಣವತಿ ರಮೇಶ್ ಮಾತನಾಡಿ, ಬಜಪೆ ಗುರುಮಂದಿರವು ಪ್ರತಿವರ್ಷ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಪುರಸ್ಕಾರ ಹಾಗೂ ಆರೋಗ್ಯ ನಿಧಿಗಳ ಮೂಲಕ ಸಮಾಜದ ವಿದ್ಯಾರ್ಥಿಗಳು ಮತ್ತು ಅಗತ್ಯವಿರುವವರಿಗೆ ನೆರವಾಗುತ್ತಿದ್ದು, ನಾರಾಯಣ ಗುರುಗಳ ತತ್ವ–ಆದರ್ಶಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

‘ನಾರಾಯಣ ಗುರು ಸಚ್ಚರಿತೆ–ಭಾಗ 1’ ಎಂಬ ನಾರಾಯಣ ಗುರುಗಳ ಜೀವನ ಚರಿತ್ರೆಯ ಗ್ರಂಥವನ್ನು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಬಿಡುಗಡೆ ಮಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರ ಸನ್ಮಯ್ ಎಸ್. ಪೂಜಾರಿ, ಕುಮಾರಿ ಸಾನ್ವಿ ಎಸ್. ಪೂಜಾರಿ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಶ್ರಾವ್ಯ ಕೆ. ತಲಕಲ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಮಿಥುನ್, ಶ್ರೀಮತಿ ಜಯಶ್ರೀ ನಾಗೇಶ್ ಹಾಗೂ ಶ್ರೀಮತಿ ಗೀತಾ ಪ್ರಶಾಂತ್ ವಾಚಿಸಿದರು.

ವಿದ್ಯಾನಿಧಿಗೆ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಿದ ಶ್ರೀಮತಿ ಸಂದ್ಯಾ ಕುಲಾಯಿ ಹಾಗೂ ಪದ್ಮನಾಭ ಪೂಜಾರಿ ಅವರನ್ನು ಗೌರವಿಸಲಾಯಿತು. ಬಜಪೆ ಪಟ್ಟಣ ಪಂಚಾಯತ್‌ನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಪೂಜಾರಿ ಅವರನ್ನೂ ಅಭಿನಂದಿಸಲಾಯಿತು.

ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು

ಕಡು ಬಡತನದ ನಡುವೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಪುರಂದರ ಪೂಜಾರಿ ಹಾಗೂ ಶೇಕರ ಪೂಜಾರಿ ಅವರಿಗೆ ಬಿಲ್ಲವ ಸಂಘ ಬಜಪೆಯ ಆರೋಗ್ಯ ನಿಧಿಯಿಂದ ವೈದ್ಯಕೀಯ ನೆರವು ನೀಡಲಾಯಿತು.

ಪರಿಸರ ಸ್ನೇಹಿ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ

ಮನೆಯಲ್ಲಿ ಬಳಕೆಯಾಗದೆ ಉಳಿಯುವ ಹೆಚ್ಚುವರಿ ಸೀರೆಗಳನ್ನು ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳಾಗಿ ಪರಿವರ್ತಿಸುವ ಹಸಿರು ದಳ ಮಂಗಳೂರು ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಗುರುತಿಸಿ, ಸಂಘದ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಒಟ್ಟು 150 ಸೀರೆಗಳನ್ನು ಸಭಾಧ್ಯಕ್ಷ ಶಿವರಾಮ ಪೂಜಾರಿ ಅವರು ಹಸಿರು ದಳ ಮಂಗಳೂರಿನ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೀರೆಯಿಂದ ತಯಾರಿಸಲಾದ ಪರಿಸರ ಸ್ನೇಹಿ ಕೈಚೀಲವನ್ನು ಹಸಿರು ದಳದ ಸದಸ್ಯರು ಸಭಾಧ್ಯಕ್ಷರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರತಿಭಾ ಅನಾವರಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಒಟ್ಟು 15 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚಿತ್ತರಂಜನ್ ಸಾಲ್ಯಾನ್, ಕೋಶಾಧಿಕಾರಿ ಪದ್ಮನಾಭ ಬಿ. ಹಾಗೂ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಉಪಸ್ಥಿತರಿದ್ದರು.

ಶ್ರೀಮತಿ ಸುಚಿತ ದೇವರಾಜ್ ಪ್ರಾರ್ಥಿಸಿದರು. ದೇವರಾಜ್ ಅಮೀನ್ ಹಾಗೂ ನಿತೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜಿತೇಶ್ ಸಾಲ್ಯಾನ್ ಸ್ವಾಗತಿಸಿದರು. ಸಂದೀಪ್ ಕುಮಾರ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಮನರಂಜನಾ ನೃತ್ಯ ಹಾಗೂ ‘ರಿಕ್ಷಾ ಡ್ರೈವರ್’ ಎಂಬ ಕಿರು ನಾಟಕ ಪ್ರದರ್ಶನಗೊಂಡಿತು.

— BYVNEWS

Leave a Reply

Your email address will not be published. Required fields are marked *