ಬ್ರಹ್ಮಶ್ರೀ ನಾರಾಯಣಗುರು ಮಂದಿರ ಗಾಣದಪಡ್ಪುವಿನಲ್ಲಿ ಭಕ್ತಿಪೂರ್ವಕ ಪ್ರಭಾವಳಿ ಸಮರ್ಪಣೆ

ಬಿ.ಸಿ.ರೋಡು: ಗಾಣದಪಡ್ಪು ಬಿಸಿರೋಡು ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಗಾಣದಪಡ್ಪು ಇದರ ಅಧ್ಯಕ್ಷರು ಹಾಗೂ ಶುಭಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕರಾದ ಭುವನೇಶ್ ಪಚಿನಡ್ಕ ಅವರ ಸೇವಾರೂಪವಾಗಿ ಕಂಚಿನ ಪ್ರಭಾವಳಿಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ, ಗುರುಮಂದಿರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅರ್ಚಕರ ವೈದಿಕ ಮಂತ್ರಘೋಷಗಳ ನಡುವೆ ಕಂಚಿನ ಪ್ರಭಾವಳಿಯನ್ನು ಗುರುಗಳ ಮೂರ್ತಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭುವನೇಶ್ ಪಚಿನಡ್ಕ ಅವರು, “ಗುರುಮಂದಿರದ ಅಭಿವೃದ್ಧಿ ಹಾಗೂ ಗುರುಗಳ ಸೇವೆಯಲ್ಲಿ ಭಾಗಿಯಾಗುವುದು ನಮ್ಮ ಪೂರ್ವಜನ್ಮದ ಪುಣ್ಯ. ನನ್ನ ತಂದೆ ಸೇಸಪ್ಪ ಕೋಟ್ಯಾನ್ ಅವರ ಸೇವಾಪಥದ ಹಾದಿಯಲ್ಲಿ ಸೇವೆಯ ರೂಪವಾಗಿ ಈ ಪ್ರಭಾವಳಿಯನ್ನು ಸಮರ್ಪಿಸಲು ಅವಕಾಶ ದೊರೆತಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ” ಎಂದು ಭಕ್ತಿಭಾವದಿಂದ ಹೇಳಿದರು.
ಗುರುಭಕ್ತಿಯೊಂದಿಗೆ ಸಮಾಜಸೇವೆ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವ ಇಂತಹ ಸೇವಾ ಕಾರ್ಯಗಳು ಬ್ರಹ್ಮಶ್ರೀ ನಾರಾಯಣಗುರುಗಳ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ವಿಶ್ವಮಾನವ ಸಂದೇಶವನ್ನು ಮತ್ತಷ್ಟು ಗಟ್ಟಿಗೊಳಿಸುವಂತಿವೆ.
ಗುರುಸೇವೆ • ಸಮಾಜಸೇವೆ • ಧರ್ಮಸೇವೆ
BYVNEWS
