ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ ಪಡೆದ ತಾಯಿ–ಮಗಳು!

BYVNEWS | ಉಡುಪಿ
ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ ಪಡೆದ ತಾಯಿ–ಮಗಳು!
ಡಾ. ರತ್ನಮಾಲಾ ಹಾಗೂ ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರ ಅಪರೂಪದ ಶೈಕ್ಷಣಿಕ ಸಾಧನೆ
ಉಡುಪಿ: ತಾಯಿ ಮತ್ತು ಮಗಳು ಒಂದೇ ದಿನ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮೆರೆದಿದ್ದಾರೆ. ಉಡುಪಿಯ ಕಿನ್ನಿಮೂಲ್ಕಿ ಬಲಾಯಿಪಾದೆಯ ನಿವಾಸಿ, ಶ್ರೀ ಸುಧಾಕರ ಸುವರ್ಣ ಅವರ ಪತ್ನಿ ಡಾ. ರತ್ನಮಾಲಾ ಹಾಗೂ ಅವರ ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರ ಈ ಸಾಧನೆ ಉಡುಪಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿರುವ ಡಾ. ರತ್ನಮಾಲಾ ಅವರು, ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದಲ್ಲಿ “ತುಳುನಾಡಿನ ಸ್ತ್ರೀ ದೈವಗಳ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕಾರ್ಕಳ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ. ಕೆ. ಅವರು ಮಾರ್ಗದರ್ಶನ ನೀಡಿದ್ದು, ಎಂ.ಜಿ.ಎಂ. ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಪುತ್ತಿ ವಸಂತಕುಮಾರ್ ಅವರು ಸಹಮಾರ್ಗದರ್ಶನ ನೀಡಿದ್ದಾರೆ.
ಇವರ ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರು ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್ಐಟಿಕೆ)ದಲ್ಲಿ ರಸಾಯನಶಾಸ್ತ್ರ ವಿಭಾಗದ ಸಂಶೋಧನೆ ಪೂರ್ಣಗೊಳಿಸಿ ಪಿಎಚ್.ಡಿ. ಪದವಿಗೆ ಅರ್ಹತೆ ಪಡೆದಿದ್ದಾರೆ. ಎನ್ಐಟಿಕೆಯ ಪ್ರಾಧ್ಯಾಪಕರಾದ ಡಾ. ಎ. ಚಿತ್ತರಂಜನ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ “Development of nickel vanadium alloy coatings through different approaches of electroplating and their characterization” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದಾರೆ.
ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ತಾಯಿ–ಮಗಳ ಸಾಧನೆ
ತಾಯಿ ಡಾ. ರತ್ನಮಾಲಾ ಅವರು ಕನ್ನಡ ಸಾಹಿತ್ಯ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅಧ್ಯಯನದಲ್ಲಿ ಸಾಧನೆ ಮಾಡಿದ್ದರೆ, ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರು ರಸಾಯನಶಾಸ್ತ್ರದ ಸಂಶೋಧನೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಿಭಿನ್ನ ಕ್ಷೇತ್ರಗಳಲ್ಲಿ ಜ್ಞಾನಸಾಧನೆ ಮಾಡಿ ಒಂದೇ ದಿನ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆದಿರುವುದು ವಿಶೇಷವಾಗಿದೆ.
ಈ ಅಪರೂಪದ ಸಾಧನೆಗೆ ಕುಟುಂಬದವರು, ಬಂಧುಮಿತ್ರರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ತಾಯಿ–ಮಗಳ ಈ ಜ್ಞಾನಯಾತ್ರೆ ಶೈಕ್ಷಣಿಕ ಸಾಧನೆಗೆ ಸ್ಫೂರ್ತಿಯಾಗಲಿ. ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು!
BYVNEWS
Voice of Society • Truthful News • Genuine Reporting
